ಜಾರ್ಜಿಯನ್ ಕೊಲ್ಲಿ -
ಮಹಾಸರೋವರಗಳಲ್ಲೊಂದಾದ ಹ್ಯುರಾನ್ ಸರೋವರದ ಈಶಾನ್ಯ ಭಾಗ; ಕೆನಡದ ಆಂಟೇರಿಯೋ ಪ್ರಾಂತ್ಯದಲ್ಲಿದೆ. ಮ್ಯಾನಿಟೊಲಿನ್ ದ್ವೀಪ ಮತ್ತು ಸಾಗೀನ್ (ಬ್ರೂಸ್) ಪರ್ಯಾಯದ್ವೀಪ ಇದನ್ನು ಸರೋವರದಿಂದ ಪ್ರತ್ಯೇಕಿಸುತ್ತವೆ. ಇದರ ಉದ್ದ 193 ಕಿ.ಮೀ. (120 ಮೈ.), ಅಗಲ 82 ಕಿ.ಮೀ. (51 ಮೈ.) ನೀರಿನ ಆಳ ಸಾಮಾನ್ಯವಾಗಿ 100`-300`. ಗರಿಷ್ಠ ಆಳ 540` (165 ಮೀ.) ಹ್ಯುರಾನ್ ಸರೋವರಕ್ಕೆ ಸಂಬಂಧ ಕಲ್ಪಿಸುವ ಮುಖ್ಯ ನಾಲೆಯ ಬಳಿಯಲ್ಲಿ ಮ್ಯಾನಿಟೊಲಿನ್ ದ್ವೀಪದ ಉತ್ತರ ಪಶ್ಚಿಮಗಳಲ್ಲಿರುವ ಉತ್ತರ ಕಾಲುವೆ ಇದನ್ನು ಹ್ಯುರಾನ್ ಸರೋವರದೊಂದಿಗೆ ಸೇರಿಸುತ್ತದೆ. ಈಶಾನ್ಯದಲ್ಲಿರುವ ಸಿಪಿಸಿಂಗ್ ಸರೋವರದಿಂದ ಹರಿದು ಬರುವ ಫ್ರೆಂಚ್ ನದಿ, ಮಸ್ಕೋಕ ಸರೋವರದಿಂದ ಹರಿಯುವ ಮಸ್ಕೋಕ ನದಿ, ಮಗನಟಾವನ್ ನದಿ, ಸಿಮ್ಕೋ ಸರೋವರದಿಂದ ಹರಿಯುವ ಸೆವರ್ನ್ ನದಿ, ದಕ್ಷಿಣದಿಂದ ಹರಿದುಬರುವ ನಾಟವಸಾಗ ನದಿ-ಇವು ಈ ಕೊಲ್ಲಿಯನ್ನು ಸೇರುತ್ತವೆ. ಜಾರ್ಜಿಯನ್ ಕೊಲ್ಲಿಯಿಂದ ಆಂಟೇರಿಯ ಸರೋವರದಲ್ಲಿರುವ ಕ್ವಿಂಟಿ ಕೊಲ್ಲಿಗೆ ಟ್ರೆಂಟ್ ಕಣಿವೆ ಜಲಮಾರ್ಗದ ಮೂಲಕ ದೋಣಿಗಳು ಸಂಚರಿಸಬಹುದು. ಈ ಎರಡೂ ಕೊಲ್ಲಿಗಳಿಗೂ ನಡುವೆ ಜಲಮಾರ್ಗ ಕಲ್ಪಸಲು 1918ರಲ್ಲಿ ಟ್ರೆಂಟ್ ಕಾಲುವೆಯನ್ನು ನಿರ್ಮಿಸಲಾಯಿತು. ಇದು ಈ ಜಲಮಾರ್ಗದ ಒಂದು ಭಾಗ.

ಜಾರ್ಜಿಯನ್ ಕೊಲ್ಲಿಯ ಆಗ್ನೇಯ ತುದಿಯಲ್ಲಿರುವ ಜಾರ್ಜಿಯನ್ ಕೊಲ್ಲಿ ದ್ವೀಪಗಳ ರಾಷ್ಟ್ರೀಯ ಉದ್ಯಾನವನ್ನು 1929ರಲ್ಲಿ ನಿರ್ಮಿಸಲಾಯಿತು. ಕೊಲ್ಲಿಯಲ್ಲಿರುವ 20,000 ಕ್ಕೂ ಹುಚ್ಚು ದ್ವೀಪಗಳ ಪೈಕಿ 30 ದ್ವೀಪಗಳು ಈ ಉದ್ಯಾನದಲ್ಲಿವೆ. ಈ ಪ್ರದೇಶದಲ್ಲಿ ದಟ್ಟವಾದ ಕಾಡನ್ನು ಬೆಳೆಯಲು ಅನುವು ಮಾಡಿಕೊಡಲಾಗಿದೆ. ಪ್ರತಿ ವರ್ಷವೂ ಸಾವಿರಾರು ಜನರು ಬೇಸಗೆಯಲ್ಲಿ ವಿಹಾರಾರ್ಥಿಗಳಾಗಿ ಬರುತ್ತಾರೆ. ಅಲ್ಲದೆ ಇದು ಒಳ್ಳೆಯ ಮೀನುಗಾರಿಕೆ ಕೇಂದ್ರ. ಬಿಳಿಯರು ಮೊಟ್ಟಮೊದಲು ನೋಡಿದ ಮಹಾಸರೋವರ ಭಾಗ ಜಾರ್ಜಿಯನ್ ಕೊಲ್ಲಿ. ಅವರು ಆಟ್ಟವ ಮತ್ತು ಫ್ರೆಂಚ್ ನದಿಗಳ ಮೂಲಕ ಈ ಕೊಲ್ಲಿಯನ್ನು ತಲುಪಿದರು.									(ಆರ್.ಎಸ್.ಇ.; ಕೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ